Wednesday, July 28, 2010

ಇತ್ತೀಚಗೆ ಕರ್ನಾಟಕದಲ್ಲಿ "ಗೋಹತ್ಯೆ ನಿಷೇದ ಕಾಯ್ದೆ" ಒಂದು ಬಗ್ಗೆಯ ಚರ್ಚೆಗೆ ಆಸ್ಪದ ನೀಡಿದೆ.ಆದರೆ ಈ ಬಗ್ಗೆ ನನ್ನ ಕೆಲವು ತಕರಾರುಗಳಿವೆ ಅದನ್ನು ನಾನು ಹೇಳಲು ಇಚ್ಚಿಸುತ್ತೇನೆ.ಗೋವು,ಗೋಮಾತೆ,ಗೋಸಗಣಿ,ಗೋಮೂತ್ರ ಇವಲ್ಲವೂ ನಮಗೆ ದೇವರ ಸಮಾನ, ಅದರಿಂದ ನಾವು ಬೇಕಾದಷ್ಟು ಅನುಕೂಲವನ್ನು ಪಡೆಯುತ್ತೇವೆ.ಮಾನವೀಯ ಹಿನ್ನೆಲೆಯಲ್ಲಿ ನೋಡಿದಾಗಲೂ 'ಗೋವನ್ನು ಮಾತ್ರ' ಸಾಯಿಸುವುದನ್ನು ಮಾತ್ರ ನಿಷೇದ ಮಾಡಬೇಕು ಎಂಬಂತೆ ಏಕರೀತಿಯಲ್ಲಿ ವಾದಿಸಿದ್ದಾರೆ. ಆಯ್ತು ಗೋಹತ್ಯೆ ಮಾತ್ರ ನಿಷೇದ ಮಾಡೋಣ ಆದರೆ ನಿಮ್ಮ ದೃಷ್ಢಿಯಲ್ಲಿ ಬೇರೆ ಪ್ರಾಣಿಗಳು ಜೀವಿಗಳಲ್ಲವೇ? ಅವುಗಳಿಗೂ ಜೀವ ಅನ್ನೋದು ಇರುತ್ತದೆಯಲ್ಲವೇ,ಜೀವ ಅಥವಾ ಉಸಿರು ಎನ್ನುವುದು ಗೋವು ಮತ್ತು ಇತರ ಜೀವಿಗಳಿಗೂ ಅಂದರೆ ಕುರಿ,ಕೋಳಿ ಇನ್ನಿತರ ಬೇರೆ ಬೇರೆಪ್ರಾಣಿಗಳಿಗೆ ಬೇರೆ ಬೇರೆ ಇದಿಯೇ ಅನ್ನುವುದು ಯೋಚಿಸಬೇಕಾದ ವಿಚಾರ. ಬಸವಣ್ಣನವರ "ಧಯೆ ಇರಬೇಕು ಸಕಲ ಪ್ರಾಣಿಗಳಲ್ಲಿ..."ಎಂಬ ವಾಕ್ಯ ಗೋವಿಗೆ ಸ್ವಲ್ಪ ಜಾಸ್ತಿ ಧಯೆ ಇರಲಿ ಅಂತಾ ಏನಾದ್ರೂ ಹೇಳಿದ್ದಾರೆಯೆ? ಹೀಗೆ ಮಾಡಿದರೆ "ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ನ" ಅಂದಂತಾಗುವುದಿಲ್ಲವೇ?ಮಾಡುವುದಿದ್ದರೇ ಎಲ್ಲಾ ಪ್ರಾಣಿಗಳ ಹತ್ಯೆಯನ್ನು ನಿಷೇದ ಮಾಡಲಿ ಅದೇಗೆ ಬರಿ ಗೋಹತ್ಯೆಯನ್ನು ಮಾತ್ರ ನಿಷೇದ ಮಾಡುತ್ತಾರೆ.ಕೇವಲ ಪುರಾಣಗಳಿಗೆ ಜೋತುಬಿದ್ದು ದೇಶದ 'ಆಹಾರ ಪದ್ದತಿ'ಯನ್ನೇ ಬದಲಿಸಬೇಕು ಎನ್ನುವುದರಲ್ಲಿ ಅರ್ಥವಿದೆಯಾ? ಸಭೆ ಸಮಾರಂಭಗಳಲ್ಲಿ ನಿಂತು ಗೋವುಗಳ ಬಗ್ಗೆ ಕೇವಲ ಮಾತನಾಡುವವರಿಗೆ,ಎಲ್ಲೋ ಒಂದುಕಡೆ ಗೋವುಗಳ ಹೆಸರೇಳಿಕೊಂಡು ನೂರಿನ್ನೂರು ಹಸುಗಳಿಗೆ ಒಂದು ಮಠ ಕಟ್ಟಿಕೊಂಡು ಹಸುಗಳಿಗೆ ಶೃಂಗಾರ ಮಾಡಿಕೊಂಡು ಅವುಗಳ ಹೆಸರಲ್ಲೇ ಬೇಳೆ ಬೇಯಿಸಿಕೊಂಡು ಬೆಳದುಕೊಂಡಿರುವ ಮಠಾಧೀಶರ ಗೋವಿನ ಕಾಳಜಿ,ಪ್ರೀತಿಗಳು ಹಳ್ಳಿಯಲ್ಲಿ ದಿನನಿತ್ಯ ಅವುಗಳ ಒಡನಾಟದಲ್ಲೆ ಬೆಳೆಯುವ ಗ್ರಾಮೀಣ ಜನರು ಗೋವನ್ನು ಸಾಕುವಾಗ ಪಡುವ ಕಷ್ಟ,ಸುಖ ಅವುಗಳ ಮೇವಿಗೆ ಪರದಾಡುವ ಪರಿಸ್ಥಿತಿ ಎಂತದ್ದು ಎನ್ನುವುದಕ್ಕೆ ನಮ್ಮ ಮನೆಯಲ್ಲೇ ನಡೆದ ಒಂದು ಘಟನೆ ನೆನಪಾಗುತ್ತಿದೆ..ಈಗ್ಗೇ ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಸುಮಾರು 25 ರಾಸು ದನಗಳು ಇದ್ದವು ಒಮ್ಮೆ ಮೇವಿಗಾಗಿ ಬೇರೊಬ್ಬರ ಜಮೀನಿಗೆ ನಮ್ಮ ಒಂದು ಹಸು ಮೇಯಲು ಹೋಗಿತ್ತು ಅದನ್ನು ನೋಡಿದ ಆ ಜಮೀನಿನ ಮಾಲೀಕ ಆ ಹಸುವಿಗೆ ದೊಣ್ಣೆಯಲ್ಲಿ ಬಾರಿಸಿದ ಹೊಡೆದ ರಭಸಕ್ಕೆ ಅದರ ಒಂದು ಮುಂಗಾಲು ಮುರಿದು ಯಾವುದೇ ರಿತಿಯ ಚಿಕಿತ್ಸೆಗೂ ವಾಸಿಯಾಗಲಿಲ್ಲ ಇದನ್ನು ನೋಡಿದ ನಮ್ಮ ತಂದೆ ಹಸುಗಳನ್ನು ಸಾಕುವ ಕಾರ್ಯಕ್ಕೆ ತಿಲಾಂಜಲಿ ಇಟ್ಟರು" ಈ ಸ್ತಿತಿಗೆ ಕಾರಣರಾರು?ಕಾಲು ಮುರಿದ ಹಸುವನ್ನು ಇಟ್ಟುಕೊಂಡು ಏನು ಮಾಡುವುದು? ಅದೂ ಅಲ್ಲದೇ ಹಸುವಿನ ಕಾಲು ಮುರಿದ ಜಮೀನಿನ ಮಾಲೀಕ ಗೋವಿನ ಬಗ್ಗೆ ಗಂಟೆ ಗಟ್ಟಲೆ ಮಾತನಾಡುವ ಒಂದು ಪಕ್ಷದ ಕಾರ್ಯಕರ್ತ ಎಂಬುದು ಒಂದು ಚೋದ್ಯದ ಸಂಗತಿ.ಎಷ್ಟೋಜನ ಮೇವಿನ ಕೊರತೆಯಿಂದ ಜಾನುವಾರು ಗಳನ್ನು ಮಾರುತ್ತಿರುವುದು ಒಂದು ನೋವಿನ ಸಂಗತಿ.ಇದರ ಬಗ್ಗೆ ಸರ್ಕಾರ ಗಮನ ಹರಿಸಿದೆಯಾ? ಇರುವ ಗೋಮಾಳಗಳನ್ನೆ ನೆಲಗಳ್ಲರು ನುಂಗಿಹಾಕಿದ್ದಾರೆ.ಗೋವಿನ ಬಗ್ಗೆ ಮಾತನಾಡುವ ಜನರು ಎಷ್ಟು ಜನ ಗೋವನ್ನು ಸಾಕಿದ್ದಾರೆ.ಅಷ್ಟೊಂದು ಇಚ್ಚೆ ಇದ್ದರೇ ಗೋವುಗಳನ್ನು ದತ್ತು ತೆಗೆದುಕೊಂಡು ಸಾಕಲಿ. ಗೋಹತ್ಯೆ ಬಗ್ಗೆ ಮಾತನಾಡುವಾಗ ವಾಸ್ತವ ಸ್ಥಿತಿಯನ್ನು ತಿಳಿದುಕೋಡು ಮಾತಾನಾಡುವುದು ಒಳಿತು.ವಯಸ್ಸಾದ,ನಿರುಪಯುಕ್ತ ಗೊಡ್ಡು ದನಗಳನ್ನು ಇಟ್ಟುಕೊಂಡು ರೈತರು ಏನು ಮಡುವುದು?ಇಂತಹ ದನಗಳನ್ನು ಕೇವಲ ಸಗಣಿಗೋಸ್ಕರ ಇಟ್ಟುಕೊಂಡರೆ ಅವುಗಳನ್ನು ಜೀವಮಾನವಿಡಿ ಸಾಕಲು ರೈತರು ಏನು ಮಾಡಬೇಕು? ಇವುಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ 1ಕಿಲೊ ಕೋಳಿ ಮಾಂಸ 100ರೂ,ಕುರಿ ಮತ್ತು ಮೇಕೆ ಮಾಂಸ 250ರಿಂದ 300ರೂಗಳು ಗ್ರಾಮೀಣ ಜನರ ಒಂದು ದಿನದ ಕೂಲಿ 60 ರೂಗಳು ,ಇವರು ಪಡೆಯುವ ಕೂಲಿ ಅವತ್ತಿನ ತುತ್ತಿಗೆ ಸಮ.ಇಂಥದ್ದರಲ್ಲಿ ಬಡ ಜನರು ಅಷ್ಟು ಬೆಲೆ ತೆತ್ತು ಬೇರೆ ಮಾಂಸಹಾರವನ್ನು ಸೇವಿಸಲು ಸಾದ್ಯವೇ ಅಥವಾ ಇಂಥಹವರಿಗೆ ಗೋಹತ್ಯೆ ನಿಷೇದ ಮಾಡಿರುವ ಸರ್ಕಾರ ರಿಯಾಯ್ತಿ ಧರದಲ್ಲಿ ಕುರಿ,ಕೋಳಿ ಮಾಂಸವನ್ನು ಪೂರೈಸುತ್ತದೆಯೇ? ಅಥವಾ ನಾವ್ಯಾಕೆ ಕೊಡಿಸಬೇಕು ಎಂದರೆ ಪರೋಕ್ಷವಾಗಿ ಅವರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ? ಅಖಂಡ ಸ್ವತಂತ್ರ ಭಾರತದಲ್ಲಿ ಮೂಲಭೂತ ಅವಶ್ಯಕವಾದ ಆಹಾರದ ಸ್ವಾತಂತ್ರ್ಯವನ್ನು ಕಸಿದಂತಾಗುವುದಿಲ್ಲವೇ? ಈಗಿನ ಪರಿಸ್ತಿತಿಯಲ್ಲಿ ಗೋಹತ್ಯೆ ನಿಷೇದ ಮಾಡಿದರೆ ಗೋಮಾಂಸದ ಕೊರತೆಯನ್ನು ಕುರಿ,ಕೋಳಿ ಮಾಂಸಗಳಿಂದ ಜನರಿಗೆ ಬೇಕಾದ ಮಾಂಸವನ್ನು ಒದಗಿಸಬಹುದೆ? ಇದನ್ನೆ ನಂಬಿಕೊಂಡ ಮತ್ತು ಚರ್ಮೋದ್ಯಮವನ್ನೆ ಬದುಕಾಗಿಸಿಕೊಂಡ ಜನರ ಗತಿಯೇನು? ಒಂದುವೇಳೆ ಗೋವುಗಳನ್ನು ಸಾಯುವವರೆಗೂ ಮನೆಯಲ್ಲಿಟ್ಟುಕೊಂಡರೆ ಅವುಗಳಿಗೆ ಆಹಾರವನ್ನು ಯಾವ ರೀತಿ ಪೂರೈಸುವುದು,ಜನಗಳಿಗೆ ಆಹಾರದ ಕೊರತೆ ಉಂಟಾಗಿರುವಾಗ ಜನರ ಜೊತೆ ಪ್ರಾಣಿಗಳ ಗೋಳನ್ನು ಹೇಗೆ ಸಹಿಸುವುದು.ಇದರಿಂದ ಪರಿಸರದ ಮೇಲೆ ಒಂದು ತರಹದ inbalance ಉಂಟಾಗುವುದಿಲ್ಲವೇ? ಆಳುವ ಸರ್ಕಾರ ಗೋಹತ್ಯೆ ನೀಷೇದ ಮಾಡಿರುವುದು ಒಂದು ತರಹ ಸಾರಾಯಿ ನಿಷೇದ ಮಾಡಿರುವ ರೀತಿಯಾಗಿದೆ.ಹೇಗೆಂದರೆ ಸಾರಾಯಿ ನಿಷೇದ "ಸಂಪೂರ್ಣ ಪಾನ ನಿಷೇದ"ವಾಗಲಿಲ್ಲ ಸರ್ಕಾರಕ್ಕೆ ಇಚ್ಚೆಯಿದ್ದಲ್ಲಿ ಎಲ್ಲಾ ರೀತಿಯ ಮದ್ಯವನ್ನು ನಿಷೇದ ಮಾಡಲಿ ಅದೇ ತರಹ ಸಂಪೂರ್ಣ ಮಾಂಸಹಾರವನ್ನು ನಿಷೇದ ಮಾಡಲಿ.ಅದು ಬಿಟ್ಟು ಕೇವಲ ಗೋಮಾಂಸವನ್ನು ನಿಷೇದ ಮಾಡುವುದಕ್ಕೆ ನನ್ನ ವಿರೋದವಿದೆ. ಸರಿಯಾಗಿ ಜನರಿಗೆ ರೇಷನ್ ಕಾರ್ಡ್ ಕೊಡದ ಸರ್ಕಾರ ಗೋಹತ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯ ನೀಡುತ್ತಿದಿಯೊ ಗೊತ್ತಿಲ್ಲ.ಸಂವಿದಾನದಲ್ಲಿ ಉಲ್ಲೇಖಿಸಿದ ಗೋವಿನ ಬಗ್ಗೆ ಯೋಚಿಸುವ ಸರ್ಕಾರ ಮತ್ತು ಜನರು ಇನ್ನಿತರ ಅಂಶಗಳಾದ ಸಮಾನತೆ,ಜಾತ್ಯತೀತತೆ,ಅಶ್ಪ್ರಸ್ಯತೆನಿರ್ಮೂಲನೆ ಬಗ್ಗೆ ಯಾಕೆ ನೈಜ ಕಾಳಜಿ ವಹಿಸುತ್ತಿಲ್ಲ .ಗೋವುಗಳ ಬಗ್ಗೆ ವಿಪರೀತ ಕಾಳಜಿ ತೋರಿಸುವ ಮಠಾಧೀಶರು ಮೇಲಿನ ಸಮಸ್ಯೆಗಳ ನಿರ್ಮೂಲನೆಗೆ ಎಷ್ಟು ಪ್ರಾಮಾಣಿಕಾವಾಗಿ ಪ್ರಯತ್ನಿಸಿದ್ದಾರೆ. ಅಥವಾ ಅವರುಗಳ ಲೆಕ್ಕದಲ್ಲಿ ಇವುಗಳೆಲ್ಲಾ ಸಮಸ್ಯೆಗಳೇ ಅಲ್ಲವೇ? ಕೆಲವು ರಾಜಕೀಯ ಪಕ್ಷಗಳಿಗೆ 'ಗೋಹತ್ಯೆ ನಿಷೇದ' ಮತ್ತು ರಾಮ ಮಂದಿರ ವಿಷಯಗಳೆ ರಾಜಕೀಯದ ಪ್ರಣಾಳಿಕೆಗಳಾಗಿವೆ ಇವುಗಳ ಮೂಲಕ ಹಿಂದೂ ಮತ ಬ್ಯಾಂಕನ್ನು ಓಲೈಸುವ ,ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ರಾಜಕೀಯ ಲಾಭ ಪಡೆಯುವ ಒಂದು ಹುನ್ನಾರವಾಗಿದೆ.ಇವು ಸಮಾಜದ ಸ್ವಾಸ್ತ್ಯವನ್ನು ಹದಗೆಡಿಸುತ್ತಿವೆ. ಸರ್ಕಾರಕ್ಕೆ ಹಾಸಿ ಹೊದ್ದುಕೊಳ್ಲುವಷ್ಟು ಸಮಸ್ಯೆಗಳಿರುವಾಗ ಕೆಲಸಕ್ಕೆ ಬಾರದ ಇಂತಹ ವಿಷಯಗಳ ಗಮನ ಕೊಡುತ್ತಿರುವುದು ಸಮಾಜದ ಶೋಚನೀಯ ಸ್ಥಿತಿ ಎನ್ನದೇ ಬೇರೆ ವಿಧಿಯಿಲ್ಲ..

Sunday, June 27, 2010

ಎನಗೊಂದು ಮಾತು ಹೇಳದೆ ಹೋದೆ ಹಂಸ ||ಪ||
ತನುವಿನೊಳಗೆ ಅನುದಿನವಿದ್ದು ||ಅ||

ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ
ಈಹೋದು ಒಂಭತ್ತು ಬಾಗಿಲ
ಗಾಳಿ ಬಂದು ಕುಟ್ಟಿ ಎಲೆ ಹಾರಿ ಹೋಗುವಾಗ
ಬೇರಿಗೆ ಹೇಳಿ ಹೋಯಿತೆ ಒಂದು ಮಾತ ||

ಏರಿಯು ನೀರ ತಡಕೊಂಡಿದ್ದಂತೆ
ನಾ ನಿನ್ನ ತಡಕೊಂಡಿದ್ದೆನಲ್ಲ
ಭೋರೆಂದು ಮಳೆಯು ಹರಿದೆದ್ದು ಹೋಗುವಾಗ
ಏರಿಗ್ಹೇಳಿ ಹೋಯಿತೆ ಒಂದು ಮಾತ ||

ನಾನಾ ಬೆಟ್ಟಗಳಲ್ಲಿ ಇಟ್ಟಾಣಿ ಫಣಿಯಲ್ಲಿ
ಇಕ್ಕಿತು ಜೇನು ತನ್ನ ಸುಖಕಾಗಿ
ಜೇನು ತುಪ್ಪವನುಂಡು ನೊಣ ಹಾರಿ ಹೋಗುವಾಗ
ಹಿಪ್ಪೆಗ್ಹೇಳಿ ಹೋಯಿದೆ ಒಂದು ಮಾತ ||

ರಸಭಾರತ ಕೋಟಿ ಹಂಸ ತಾನೊಡಗೂಡಿ
ಪೆಸರು ಪೇಳುವನೊ ಅನುದಿನವು
ರಸ ಭೋಜನವುಂಡು ಜ್ಯೋತಿ ತಾ ಹೋಗುವಾಗ
ಪ್ರಣತಿಗ್ಹೇಳಿ ಹೋಯಿತೆ ಒಂದು ಮಾತ ||

ಸರ್ಪಶಯನನಾಡಿದ ಮಾತು ಹುಸಿಯಲ್ಲ
ಫಣಿಯಕ್ಷರದ ಮೇಲೆ ಕೊಡಲಿಲ್ಲ
ಚಪ್ಪಾಣಿ ಮುತ್ತು ಬಾಯಿ ಬಿಚ್ಚಿ ಹೋಗುವಾಗ
ದುಃಖ ಬೇಡ ಪುರಂದರವಿಠಲ ||

Friday, June 25, 2010

ಯಾಕೋ ಇತ್ತೀಚಿನ ಬೆಳವಣಿಗೆ ಗಳನ್ನು ನೋಡಿದರೇ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೆ ಕಳೆದುಕೊಂಡಿದ್ದಾರೆ ಅನಿಸ್ತಿದೆ, ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೆ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ .ಪ್ರತಿಪಕ್ಷಗಳಂತೂ ಒಳಜಗಳ,ನಾಯಕರ ಪ್ರತಿಷ್ಠೆಗಳಲ್ಲಿಯೇ ಅದು ಅಸ್ತಿತ್ವದಲ್ಲಿದೆಯೇ ಇಲ್ಲವೇ ಎನ್ನುವುದೇ ತಿಳಿಯದಾಗಿದೆ..ನಿಜವಾಗಿ ರಾಜ್ಯದಲ್ಲಿ ಪ್ರತಿಪಕ್ಷಗಳ ಕೆಲಸ ಮಾಡುತ್ತಿರುವುದು ಮಾದ್ಯಮಗಳು,ರಾಜ್ಯಪಾಲರು,ಲೋಕಾಯಕ್ತ ಮತ್ತು ಮಾನವ ಹಕ್ಕುಗಳ ಆಯೋಗಗಳು
ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಇವುಗಳನ್ನೇ ನಿಷ್ಕ್ರೀಯಗೊಳಿಸಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಕೆಲಸ.ಒಂದುಕಡೆ ರಾಜ್ಯಪಾಲರು ಸರ್ಕಾರದ ರೀತಿನೀತಿಗಳನ್ನು ಪ್ರಶ್ನಿಸಿದರೆ ಸಂಪುಟದ ಸದಸ್ಯರೇ ರಾಜ್ಯಪಾಲರನ್ನೇ ಹೀಯಾಳಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ತಮ್ಮ ಉದ್ಧಟತನ ಪ್ರದರ್ಶಿಸಿದ್ದಾರೆ. ದೇಶ ಕಂಡ ಅತ್ಯುತ್ತಮ ಕಾನೂನು ತಜ್ಞರಲ್ಲಿ ನಮ್ಮ ರಾಜ್ಯಪಾಲರು ಒಬ್ಬರು.ಅವರ ಸಲಹೆ ಗಳನ್ನು ಸ್ಪರ್ದಾತ್ಮಕತೆ ಯಿಂದ ನೋಡದೇ ಪೂರ್ವಗ್ರಹಪೀಡಿತರಾಗಿ ನೋಡಿ ಅವರ ದಿವ್ಯ ನಿರ್ಲ್ಯಕ್ಷ್ಯ ತೋರುತ್ತಿರುವುದು ನಮ್ಮ ಸರ್ಕಾರದ ಸಾಚಾತನವನ್ನೇ ಅನುಮಾನದಿಂದ ನೋಡುವಂತಾಗಿದೆ.
ಇನ್ನು ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರಿಗೆ ಅವರ ಅಂಗರಕ್ಷಕರನ್ನೇ ನೇಮಿಸದೇ ಅವರೇ ದೂರು ನೀಡುವಂತ ಪರಿಸ್ಥಿತಿ. ಅವರನ್ನು ಸಹ ಬಹಿರಂಗವಾಗಿ ತೆಗಳುತ್ತ ಮಾನಸಿಕ ಸ್ಥೈರ್ಯವನ್ನೆ ಹುಡುಗಿಸುವ ಪ್ರಯತ್ನ ಮಾಡುತ್ತಿದೆ..
ಇನ್ನು ಲೋಕಾಯುಕ್ತರ ರಾಜಿನಾಮೆ ರಾಜ್ಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಸಿದೆ...ಸರ್ಕಾರದ ಅಸಹಕಾರ, ದಿವ್ಯ ನಿರ್ಲ್ಯಕ್ಷ್ಯ,ನಿಷ್ಕ್ರೀಯತೆ,ಪರಮಾಧಿಕಾರ,ಗಣಿ ವಿಷಯಕ್ಕೆ ಇವೇಲ್ಲವೂ ಲೋಕಾಯುಕ್ತರ ರಾಜಿನಾಮೆಗೆ ಕಾರಣವಾಗಿರಬಹುದು.ಆದರೇ ಇಂತಹ ಸಂದರ್ಭದಲ್ಲಿ ಅವರ ರಾಜೀನಾಮೆ ರಾಜ್ಯದ ಜನತೆಯಲ್ಲಿ ಭ್ರಮನಿರಸನವನ್ನು ಮೂಡಿಸಿದೆ.ರಾಜೀನಾಮೆ ವಾಪಸ್ಸು ಪಡೆಯುವಂತೆ ಎಲ್ಲಡೆಯಿಂದ ಹೋರಾಟದ ಕೂಗುಗಳು ಕೇಳಿಬರುತ್ತದೆ.ರಾಜ್ಯಪಾಲರಂತೂ ಲೋಕಾಯುಕ್ತರ ರಾಜೀನಾಮೆ ಪ್ರಜಾಪಭುತ್ವ ವ್ಯವಸ್ಥೆಯ ಪ್ರಮುಖ ಸಂಸ್ಥೆಯಂದರ ಅವನತಿಯ ಸೂಚಕವೆಂದು ಆತಂಕ ವ್ಯಕ್ತಪಡಿಸಿದ್ದಾರೆ.ಕೇಂದ್ರದ ಗೃಹ ಸಚಿವರೂ ಲೋಕಾಯುಕ್ತರು ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆಯಲು ಕೇಳಿಕೊಂಡಿರುವುದು ಅವರ ಮೌಲ್ಯವನ್ನು ತೋರಿಸುತ್ತದೆ. ರಾಷ್ಟ್ರ ಕಂಡ ಅತ್ಯುತ್ತಮ ನ್ಯಾಯಾವಾದಿಯಾಗಿ,ರಾಜ್ಯದ ಲೋಕಾಯುಕ್ತಾರಾಗಿ ಅವರ ಕಳಂಕರಹಿತ,ಜನಸ್ನೇಹಿ ಸೇವೆಯು ಜನತೆಯ ಮುಂದಿರುವಾಗ ರಾಜ್ಯದ ಬಿಜಿಪಿ ಮುಖಂಡರು ಅವರ ನಿಷ್ಠೆಯ ಬಗ್ಗೆ ಮಾತನಾಡಿರುವುದು ನಾಚಿಕೆಗೇಡಿನ ಹೇಯಕೃತ್ಯವೆಂದೇ ಹೇಳಬಹುದು..
ಕೊನೆಯದಾಗಿ ಕರ್ನಾಟಕದ ಹಿತಕ್ಕಾಗಿ,ಭ್ರಷ್ಟರ ನಿರ್ಮೂಲನೆಗೆ, ಶ್ರೀ,ಸಂತೋಷ್ ಹೆಗಡೆ ಯವರ ಅವಶ್ಯಕತೆ ತುಂಬಾ ಇದೆ ಆದ್ದರಿಂದ ರಾಜ್ಯದ ಜನತೆಗೋಸ್ಕರವಾಗಿಯಾದರು ತಮ್ಮ ನಿಲುವನ್ನು ಬದಲಿಸುವಂತಾಗಲಿ ಹಾಗೂ ಸರ್ಕಾರವು ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವತ್ತ ಪ್ರಾಮಾಣಿಕವಾಗಿ ಪ್ರಯತ್ನಿಸುವಂತಾಗಲಿ ಎಂದು ಬಯಸೋಣ....